ಗ್ವಿನಿಚೆಲ್ಲಿ, ಗ್ವಿಡೋ

	ಸು. 1240-1276. ಇಟಲಿಯ ಒಬ್ಬ ಕವಿ. ಈತ ಜನಿಸಿದ್ದು ಬೊಲೊನ್ಯ ಎಂಬಲ್ಲಿ. ಕೆಲಕಾಲ ನ್ಯಾಯಶಾಸ್ತ್ರಪಂಡಿತನಾಗಿ ಸೇವೆ ಸಲ್ಲಿಸಿದ. ಘಿಬಲೀನ್ ಲ್ಯಾಂಬರ್‍ಟಾಜ್ó ಪಕ್ಷದ ಇನ್ನಿತರ ಸದಸ್ಯರೊಂದಿಗೆ ಈತನನ್ನೂ ದೇಶದಿಂದ ಗಡೀಪಾರುಮಾಡಲಾಯಿತು (1274), ದೇಶ ಬಿಟ್ಟು ಹೊರಗಿದ್ದಾಗಲೇ ಮರಣ ಹೊಂದಿದ. ಇವನ ಬಾಳು ಅಲ್ಪ ಅವಧಿಯದ್ದಾದರೂ ಈತನ ಕವನ ಸೃಷ್ಟಿ ವಿದ್ವಜ್ಜನರ ಮೆಚ್ಚುಗೆ ಗಳಿಸಿತು. ಪ್ರೇಮಕಾವ್ಯದ ವಸ್ತುವನ್ನು ಕುರಿತು ಹೇಳುವುದು ಮಾತ್ರವಲ್ಲದೆ ಪದ್ಯಶೈಲಿಯಲ್ಲೂ ಈತ ತನ್ನ ವೈಶಿಷ್ಟ್ಯವನ್ನು ತೋರ್ಪಡಿಸಿದ್ದಾನೆ. ಪ್ರೇಮದ ಅಂತರಂಗಿಕ, ಆಧ್ಯಾತ್ಮಿಕತೆ ಮತ್ತು ಘನತೆಗಳು ಇವನ ಕವನಗಳಲ್ಲಿ ಕಾಣಬರುತ್ತವೆ. ತನ್ನ ಅನುಭವಗಳನ್ನು ಬಲು ನಯವಾಗಿಯೂ ಜಾಣ್ಮೆಯಿಂದಲೂ ತನ್ನ ಕವನಗಳಲ್ಲಿ ಈತ ಮೂಡಿಸಿದ್ದಾನೆ. ಡಾಂಟೆಯಂಥ ಕವಿಗಳಿಂದಲೂ ಈತ ಮೆಚ್ಚುಗೆ ಪಡೆದಿದ್ದ. ಡಾಂಟೆ ಈತನನ್ನು ತನ್ನ ಸಾಹಿತ್ಯ ಕಪಿತನೆಂದು ಕರೆದದ್ದುಂಟು. ಈತ 20 ಲಘುಗೀತೆಗಳನ್ನೂ ಹಲವು ಸಾನೆಟ್ಟುಗಳನ್ನೂ ರಚಿಸಿದ್ದಾನೆ. ಈ ಕವನಗಳ ಅನುವಾದಗಳು ದಿ ಅರ್ಲಿ ಇಟಾಲಿಯನ್ ಪೊಯೆಟ್ಸ್ (1861) ಮತ್ತು ಇನ್ ಆಂತಾಲಜಿ ಆಫ್ ಇಟಾಲಿಯನ್ ಪೊಯೆಮ್ಸ್ (1922) ಎಂಬ ಕವನ ಸಂಗ್ರಹಗಳಲ್ಲಿ ಕಾಣಬರುತ್ತವೆ.  
(ಪಿ.ಎಂ.ಎಚ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ